ಮರಳುಸೊಳ್ಳೆ ಜ್ವರ - 
ಫ್ಲೀಬಾಟಿಮಿನೀ ಗುಂಪಿನ ಫ್ಲೀಬಾಟಮಸ್ ಎಂಬ ಹೆಸರಿನ ಸೊಳ್ಳೆಯ ಕಡಿತದಿಂದ ಹರಡುವ ಒಂದು ವೈರಸ್ ರೋಗ(ಸ್ಯಾಂಡ್ ಫ್ಲೈ ಫೀವರ್). ಈ ಸೊಳ್ಳೆ ನೊಣಗಳ ಜಾತಿಗೆ ಸೇರಿದೆ. ಫ್ಲೀ ಪಪಾಟಾಸಿಯೈ ಎಂಬ ಪ್ರಭೇದದಿಂದಲೇ ಮುಖ್ಯವಾಗಿ ರೋಗ ಹರಡುವುದರಿಂದ ಇದಕ್ಕೆ ಪಾಪಾಟಾಸಿ ಜ್ವರ ಎಂಬ ಹೆಸರೂ ಇದೆ. ಆದರೆ ಪಪಾಟಾಸಿಯೈ ಅಲ್ಲದೆ ಫ್ಲೀ ಆರ್ಜೆಂಟಿಪಿಸ್, ಫ್ಲೀ ಸಾರ್ಜೆಂಟ್ ಮುಂತಾದ ಪ್ರಭೇದಗಳೂ ರೋಗವನ್ನು ಹರಡಬಲ್ಲವು. ಈ ರೋಗದ ಜೊತೆಗೆ ಉಷ್ಣವಲಯ ವ್ರಣ(ಟ್ರಾಪಿಕಲ್ ಸೋರ್, ಡೆಲ್ಹಿಬಾಯಿಲ್ ಮತ್ತು ಕಾಳಜ್ವರ (ಕಾಲ ಆಜಾರ್) ಇವುಗಳ ಹರಡುವಿಕೆಗೂ ಮರಳುಸೊಳ್ಳೆಗಳು ಕಾರಣವಾಗಿರುವುದುಂಟು.

	ಮರಳುಸೊಳ್ಳೆ ಸಾಧಾರಣ ಸೊಳ್ಳೆಗಿಂತಲೂ ಚಿಕ್ಕದು. ಯೂರೊಪ್, ಏಷ್ಯ ಮತ್ತು ಆಫ್ರಿಕ ಖಂಡಗಳಲ್ಲಿ ಕಂಡುಬರುತ್ತದೆ. ಮೆಡಿಟರೇನಿಯನ್ ಸಮುದ್ರದ ಸುತ್ತಣತೀರ, ಅಲ್ಲಿಂದ ಪೂರ್ವಕ್ಕೆ ಪಾಕಿಸ್ತಾನ, ಚೀನ ಮತ್ತು ಬರ್ಮ ಪ್ರಾಂತ್ಯಗಳಲ್ಲಿ ಈ ಕೀಟ ಸಾಮಾನ್ಯ. ಪಾಕಿಸ್ತಾನದ ಚಿತ್ರಾಲ್‍ನಲ್ಲಿ ಇದರ ಹಾವಳಿ ಹೆಚ್ಚಾಗಿದ್ದು ರೋಗ ಅಲ್ಲಿ ಪಿಡುಗಾಗಿದೆ. (ಎಂಡೆಮಿಕ್). ಬೇಸಗೆ ಮತ್ತು ಮಳೆಗಾಲ ಆರಂಭವಾಗುವಾಗ ಈ ಸೊಳ್ಳೆಗಳ ಸಂಖ್ಯಾಭಿವೃದ್ಧಿ ಆಗುತ್ತದೆ. ಇವುಗಳ ಹಾವಳಿ ಅನುಸರಿಸಿ ರೋಗದ ವ್ಯಾಪಕತೆ ಇರುತ್ತದೆ. ಮಲೇರಿಯಾದಲ್ಲಿಯಂತೆಯೇ ಇಲ್ಲಿಯೂ ಗಂಡು ಸೊಳ್ಳೆ ನಿರುಪದ್ರವಿ. ಹೆಣ್ಣುಸೊಳ್ಳೆ ಮಾತ್ರ ರಕ್ತಾಹಾರಿ ಅರ್ಥಾತ್ ರೋಗಕಾರಕ. ಸಾಮಾನ್ಯವಾಗಿ ನಿಶಾಚರಿಯಾಗಿದ್ದರೂ ಮನೆಯೊಳಗೆ ಕತ್ತಲು ಸ್ಥಳಗಳಲ್ಲಿ ಹಗಲೂ ಈ ಸೊಳ್ಳೆ ಕಡಿಯುವುದುಂಟು. ಬಚ್ಚಲಿನಲ್ಲಿ ಇಲ್ಲವೇ ಕಲ್ಲು ಚಪ್ಪಡಿಗಳ ಸಂದಿಯಲ್ಲಿ ಅಡಗಿದ್ದು ಅಲ್ಲಿ ಸೇರುವ ಕಸದಲ್ಲಿ ಮೊಟ್ಟೆ ಇಟ್ಟು ಸಂಖ್ಯಾಭಿವೃದ್ಧಿಯಾಗುವುದಿದೆ. ಹೆಣ್ಣುಸೊಳ್ಳೆ ರೋಗಿಯನ್ನು ಕಡಿದು ರಕ್ತ ಹೀರಿದ ಮೇಲೆ ಇನ್ನೊಬ್ಬ ವ್ಯಕ್ತಿಯನ್ನು ಕಡಿದಾಗ ಅದರ ಬಾಯಿಯಿಂದ ಒಸರುವ ಲಾಲಾರಸದೊಡನೆ ರೋಗಾಣು ಹೊರಬಂದು ಸೋಂಕಿಗೆ ಕಾರಣವಾಗುತ್ತದೆ. ಅಲ್ಲದೆ ರೋಗಾಣುಗಳನ್ನು ಧರಿಸಿರುವ ಇಂಥ ಸೊಳ್ಳೆ ತನ್ನ ಸಂತಾನಕ್ಕೂ ಅವನ್ನು ವರ್ಗಾಯಿಸುವುದರಿಂದ ಆ ಮೂಲಕವೂ ರೋಗ ಹರಡಬಹುದು. ಮರಳುಸೊಳ್ಳೆ ಜ್ವರವೇ ಇರದ ಕಡೆ ಆನುವಂಶಿಕವಾಗಿ ಕ್ರಿಮಿಯನ್ನು ಪಡೆದಿರುವ ಇಂಥ ಸೊಳ್ಳೆಗಳ ಕಡಿತದಿಂದ ಹೊಸದಾಗಿ ಜ್ವರ ಕಂಡುಬರಬಹುದು. 
	
ರೋಗಕಾರಕ ವೈರಸ್ ಇರುವ ಕೀಟ ಆರೋಗ್ಯವಂತರನ್ನು ಕಡಿದ 3-6 ದಿವಸಗಳ ಬಳಿಕ ಯಾವುದೇ ಸೂಚನೆ ಇರದೆ ರೋಗ ತಲೆದೋರುತ್ತದೆ. ತಕ್ಕ ಮಟ್ಟಿಗೆ ಹೆಚ್ಚಾಗಿಯೇ ಇರುವ ಜ್ವರ(39.5ಂ-40.5ಂಛಿ), ಮೈ ಕೈ ನೋವು, ಬೆನ್ನುನೋವು, ತಲೆನೋವು ಇವುಗಳಿಂದ ಇದು ಇನ್‍ಫ್ಲೂಯೆನ್‍ಜದಂತೆ ಕಂಡುಬಂದರೂ ನೆಗಡಿ ಕೆಮ್ಮುಗಳಿರುವುದಿಲ್ಲ. ಆದರೆ ಕಣ್ಣು ಕೆಂಪೇರುವುದು, ಕಣ್ಣಿನಲ್ಲಿ ನೀರು ಸುರಿಯುವುದು, ಬೆಳಕಿನಲ್ಲಿ ಕಣ್ಣು ತೆರೆಯಲಾಗದಿರುವುದು, ಕಣ್ಣುಗುಡ್ಡೆ ಚಲಿಸಿದಾಗ ನೋವಾಗುವುದು ಕಂಡುಬರುತ್ತವೆ. ಹಸಿವಾಗದಿರುವುದು, ವಾಕರಿಕೆ, ವಮನ ಇತರ ಲಕ್ಷಣಗಳು ದಡಾರ, ಟೈಫಸ್ ಮುಂತಾದ ಹೊಮ್ಮುಜ್ವರಗಳಲ್ಲಿ (ಎಕ್ಸಾಂತಿಮ್ಯಾಟಸ್ ಫೀವರ್ಸ್) ದದ್ದು, ಗಳಲೆಗಳು ಕಂಡುಬರುತ್ತವೆ; ಆದರೆ ಈ ಜ್ವರದಲ್ಲಿ ಹಾಗೇನು ಪ್ರಕಟವಾಗುವುದಿಲ್ಲ. ಜ್ವರ ಕಾಣಿಸಿಕೊಳ್ಳುವ ಮುಂಚೆ ಒಂದುದಿನ, ಜ್ವರ ಬಂದಮೇಲೆ ಕಡೆಪಕ್ಷ ಒಂದು ದಿನ ವ್ಯಕ್ತಿಯ ರಕ್ತದಲ್ಲಿ ರೋಗಾಣುಗಳಿರುತ್ತವೆ. ಈ ವೇಳೆ ಮರಳುಸೊಳ್ಳೆ ಕಡಿದರೆ ರೋಗಾಣು ಅದರ ದೇಹದ ಒಳಹೊಕ್ಕು ಬೇರೆಯವರನ್ನು ಅದು ಕಡಿದಾಗ ರೋಗ ಹರಡುತ್ತದೆ. 

	ಮರಳುಸೊಳ್ಳೆ ಜ್ವರ ಮಾರಕ ರೋಗವಲ್ಲ. 3-5 ದಿವಸಗಳಲ್ಲಿ ತಾನಾಗಿಯೇ ವಾಸಿ ಆಗುತ್ತದೆ. ಹಠಾತ್ತನೆ ಜಲ್ಲನೆ ಬೆವರಿ ಜ್ವರ ಇಳಿದುಬಿಡುತ್ತದೆ. ಈ ವೇಳೆ ಮೂಗಿನಿಂದ ರಕ್ತಸ್ರಾವ ಆಗಬಹುದು. ಆತಂಕಪಡಬೇಕಾದ ಸ್ಥಿತಿ ಏನೂ ಇಲ್ಲ. ಇದಕ್ಕೆ ಅಂಥ ವಿಶಿಷ್ಟ ಔಷಧವೂ ಇಲ್ಲ. ಜ್ವರ ಇರುವ ಕಾಲದಲ್ಲಿ ಲಾಕ್ಷಣಿಕವಾಗಿ ಚಿಕಿತ್ಸಿಸುವುದು ರೂಢಿ. ಜ್ವರ ಇಳಿದು ಹೋದರೂ ರೋಗದಿಂದ ನಿಶ್ಯಕ್ತನಾದ ರೋಗಿ ಚೇತರಿಸಿಕೊಳ್ಳಲು ಬಲುಕಾಲಬೇಕು. ಚೇತರಿಸಿಕೊಂಡು ರೋಗಿ ಸಾಮಾನ್ಯವಾಗಿ ಶೀಘ್ರದಲ್ಲೇನೂ ಇನ್ನೊಂದು ಸಲ ಇದೇ ಜ್ವರದಿಂದ ಪೀಡಿತನಾಗುವುದಿಲ್ಲ, ಆದರೆ ಈ ಜ್ವರದ ವೈರಸ್ ದೀರ್ಘಕಾಲಕ ಪ್ರತಿರೋಧಕ ವಸ್ತುವನ್ನು ಉತ್ಪಾದಿಸಲಾರದು.
(ಎಸ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ